ಗೋದಾವರಿ, ಪೂರ್ವ ಮತ್ತು ಪಶ್ಚಿಮ

ಆಂಧ್ರ ಪ್ರದೇಶದಲ್ಲಿ ಅಕ್ಕಪಕ್ಕದಲ್ಲಿರುವ ಎರಡು ಜಿಲ್ಲೆಗಳು. ಕೆಳಗೋದಾವರಿಯ ಆಚೀಚೆ ಸಮುದ್ರದ ಅಂಚಿನವರೆಗೂ ಹಬ್ಬಿರುವ ಈ ಜಿಲ್ಲೆಗಳು ಪರಸ್ಪರವಾಗಿ ಗೋದಾವರಿ ನದಿಯಿಂದ ಪ್ರತ್ಯೇಕಿಸಲ್ಪಟ್ಟು, ಗೋದಾವರಿಯ ಪೂರ್ವಕ್ಕಿರುವ ಭಾಗ ಪೂರ್ವ ಗೋದಾವರೀ ಜಿಲ್ಲೆಯೆಂದೂ, ಪಶ್ಚಿಮಕ್ಕಿರುವ ಭಾಗ ಪಶ್ಚಿಮ ಗೋದಾವರೀ ಜಿಲ್ಲೆಯೆಂದೂ ಪ್ರಣೀತವಾಗಿವೆ. ಪೂರ್ವ ಗೋದಾವರಿಯ ವಿಸ್ತೀರ್ಣ 4,181 ಚ. ಮೈ.; ಜನಸಂಖ್ಯೆ 30,77,190 (1971). ಪಶ್ಚಿಮ ಗೋದಾವರಿ ಜಿಲ್ಲೆ 2,980 ಚ.ಮೈ. ವಿಸ್ತಾರವಾಗಿದೆ; ಅದರ ಜನಸಂಖ್ಯೆ 23,64,816 (1971). ಪೂರ್ವ ಗೋದಾವರಿಯ ಆಡಳಿತ ಕೇಂದ್ರ ಕಾಕಿನಾಡ (1,64,172); ಗೋದಾವರಿ ನದಿಯ ಕವಲುಗಳಲ್ಲೊಂದರ ದಡದ ಮೇಲಿದೆ. ಹಿಂದೆ ರಾಜಮಹೇಂದ್ರಿ ಇದರ ಕೇಂದ್ರವಾಗಿತ್ತು. ಪಶ್ಚಿಮ ಗೋದಾವರಿಯ ಆಡಳಿತ ಕೇಂದ್ರ ಏಲೂರು (1,27,047).

ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳ ಪ್ರದೇಶದ ಸ್ವಾಭಾವಿಕ ಲಕ್ಷಣ ಒಂದೇ ಸಮನಾಗಿಲ್ಲ. ವಾಯುವ್ಯ ಭಾಗ ಹೆಚ್ಚು ಫಲವತ್ತಾಗಿಲ್ಲ. ಅದು ಹಿಂದುಳಿದಿದೆ. ಗೋದಾವರಿಯ ಮುಖಜ ಭೂಮಿ ಪ್ರದೇಶ ತುಂಬ ಫಲವತ್ತಾಗಿದೆ. ದಕ್ಷಿಣ ಭಾರತದ ಬತ್ತದ ಕಣಜವೆಂದು ಇದು ಪ್ರಸಿದ್ಧವಾಗಿದೆ. ಈ ಎರಡೂ ಪ್ರದೇಶಗಳ ನಡುವಣ ಭಾಗ ಎತ್ತರವಾಗಿದೆ.

ಸಮುದ್ರದಿಂದ 64 ಕಿ.ಮೀ. ದೂರದಲ್ಲಿ ಧವಳೇಶ್ವರದ ಬಳಿ ಗೋದಾವರಿಗೆ ಅಣೆಕಟ್ಟನ್ನು ಕಟ್ಟಲಾಗಿದೆ. ಈ ಅಣೆಕಟ್ಟಿನಿಂದಾಗಿ ಗೋದಾವರೀ ಮುಖಜಭೂಮಿಯ ಪ್ರದೇಶದಲ್ಲಿ ವರ್ಷವಿಡೀ ಬತ್ತದ ಸಾಗುವಳಿ ಸಾಧ್ಯವಾಗಿದೆ. ಇಲ್ಲಿ ಬತ್ತವೇ ಮುಖ್ಯ ಬೆಳೆ. ಇತರ ಆಹಾರ ಧಾನ್ಯಗಳನ್ನೂ ಬೇಳೆ, ಎಣ್ಣೆ ಬೀಜ, ಹೊಗೆಸೊಪ್ಪು ಮತ್ತು ಕಬ್ಬನ್ನೂ ಬೆಳೆಯುತ್ತಾರೆ.

ಕಾಕಿನಾಡ ಒಂದು ಬಂದರು. ಆದರೆ ಗೋದಾವರೀ ನದಿ ಸರ್ವದಾ ಮಣ್ಣು ಹೊತ್ತು ತರುವುದರಿಂದ ಹಡಗುಗಳು ದಡದಿಂದ ಬಲು ದೂರದಲ್ಲೇ ನಿಲ್ಲಬೇಕಾಗುತ್ತದೆ. ಪೂರ್ವ ಗೋದಾವರಿಯಲ್ಲಿ ಕಬ್ಬು ಬೆಳೆಯುವ ಪ್ರದೇಶದ ನಡುವೆ ಇರುವ ಸಮಾಲ್ಕೋಟ್‍ನಲ್ಲಿ ಸಕ್ಕರೆ ಉತ್ಪಾದನೆಯಾಗುತ್ತದೆ. ಪಶ್ಚಿಮ ಗೋದಾವರಿಯ ಏಲೂರಿನಲ್ಲಿ ಉಣ್ಣೆ ಜಮಖಾನೆಗಳು ತಯಾರಾಗುತ್ತವೆ. ಪೂರ್ವ ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಉತ್ತಮ ಕೈಮಗ್ಗದ ಬಟ್ಟೆಗಳು ತಯಾರಾಗುತ್ತಿದ್ದುವು. ರಾಜಮಹೇಂದ್ರಿ (1,88,841) ಒಂದು ತೀರ್ಥಕ್ಷೇತ್ರ. ಹನ್ನೆರಡು ವರ್ಷಗಳಿಗೊಮ್ಮೆ `ಪುಷ್ಕರಂ' ದಿನದಂದು ಗೋದಾವರಿಯ ನೀರಿನಲ್ಲಿ ಮೀಯಲು ನಾನಾ ಕಡೆಗಳಿಂದ ಹಿಂದೂ ಆಸ್ತಿಕರು ಇಲ್ಲಿಗೆ ಬರುತ್ತಾರೆ.

ಗೋದಾವರಿ ಜಿಲ್ಲೆ ಪ್ರದೇಶಗಳು ಒರಿಸ್ಸ ಮತ್ತು ವೆಂಗಿ ರಾಜರ ಆಳ್ವಿಕೆಗೆ ಒಳಪಟ್ಟಿದ್ದವು. ಸ್ಥಳೀಯ ಪಾಳೆಯಗಾರರು ಸ್ವತಂತ್ರರಾಗಲು ಆಗಿಂದಾಗ್ಗೆ ಪ್ರಯತ್ನಿಸುತ್ತಿದ್ದರು. 16ನೆಯ ಶತಮಾನದ ಆರಂಭದಲ್ಲಿ ಇಡೀ ಜಿಲ್ಲೆ ಮುಸ್ಲಿಂ ಆಕ್ರಮಣಕಾರರ ವಶವಾಯಿತು. ಕರ್ಣಾಟಕ ಪ್ರದೇಶದಲ್ಲಿ ಫ್ರೆಂಚ್ ಮತ್ತು ಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಗಳ ಬಡಿದಾಟಗಳ ಅಂತ್ಯದಲ್ಲಿ ಇದು ಬ್ರಿಟಿಷರಿಗೆ ಸೇರಿತು (1765). ಸು. 6 ಚ.ಮೈ. ವಿಸ್ತೀರ್ಣದ ಯಾನಾನ್ ಮಾತ್ರ ಫ್ರೆಂಚರ ವಶದಲ್ಲಿ ಉಳಿದಿತ್ತು. ಭಾರತ ಸ್ವತಂತ್ರವಾದ ಮೇಲೆ, 1954ರಲ್ಲಿ ಅದು ಭಾರತಕ್ಕೆ ವರ್ಗವಾಯಿತು. ಹಳೆಯ ಗೋದಾವರಿ ಮತ್ತು ಕೃಷ್ಣಾ ಜಿಲ್ಲೆಗಳಿಂದ ಪೂರ್ವ ಮತ್ತು ಪಶ್ಚಿಮ ಗೋದಾವರೀ ಜಿಲ್ಲೆಗಳ ರಚನೆಯಾದ್ದು 1925ರಲ್ಲಿ.						(ಆರ್.ಪಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ